ಭೂಮಿಯ ಹುಟ್ಟಿನಿಂದ ಇಲ್ಲಿಯವರೆಗಿನ ಕಾಲವನ್ನು ಭೂರಚನಶಾಸ್ತ್ರದ ಪ್ರಮುಖ ಘಟನೆಗಳ ಆಧಾರದ ಮೇಲೆ ವಿಭಾಗಿಸಲಾಗುತ್ತದೆ. ಈ ವಿಭಾಗಗಳೇ ಭೂರಚನಶಾಸ್ತ್ರದ ಯುಗಗಳು. ಭೂರಚನಶಾಸ್ತ್ರದ ಯುಗಗಳನ್ನು ಮಹಾಕಲ್ಪ (ಸೂಪರ್‌ಇಯಾನ್), ಕಲ್ಪ (ಇಯಾನ್), ಯುಗ (ಎರಾ), ಅವಧಿ (ಪೀರಿಯಡ್), ಶಕ (ಎಪೋಕ್) ಮತ್ತು ಕಾಲ (ಏಜ್) ಎಂದು ಉಪವಿಭಾಗಗಳನ್ನಾಗಿ ಮಾಡಲಾಗಿದೆ. ಭೂಮಿಯ ಹುಟ್ಟನ್ನು ವಿಕರಣಪಟುತ್ವ ಪದ್ಧತಿಯ (ರೇಡಿಯೋಆಕ್ಟಿವ್ ಮೆಥಡ್) ಪ್ರಕಾರ ೪,೫೪ ಶತಕೋಟಿ ವರುಷಗಳ ಹಿಂದೆ ಎಂದು ಅಂದಾಜಿಸಲಾಗಿದೆ. ಬೇರೆ ಬೇರೆ ಕಾಲಮಾನಗಳನ್ನು ಅವುಗಳ ಸಮಯದಲ್ಲಿನ ಪ್ರಮುಖ ಭೂಗೋಳಿಕ ಅಥವಾ ಅಂದು ಬದುಕಿದ್ದ ಜೀವಿಗಳ ಘಟನೆಗಳ ಆಧಾರದ ಮೇಲೆ ವಿಭಜಿಸಲಾಗಿದೆ. ಹೀಗಾಗಿ ಸಾರ್ವತ್ರಿಕ ಅಳಿಯುವಿಕೆ (ಜೀವಿಗಳ) ಒಂದು ಘಟನೆಯಾಗಿ ಕ್ರೆಟೇಶಿಯಸ್ ಮತ್ತು ಪಾಲಿಯೊಜೀನ್ ನಡುವಿನ ಗಡಿಯಾಗಿ ಕ್ರೆಟೇಶಿಯಸ್-ಪಾಲಿಯೊಜೀನ್ ಸಾರ್ವತ್ರಿಕ ಅಳಿಯುವಿಕೆ ಪ್ರಮುಖವಾಗುತ್ತದೆ. == ಹೆಸರಿಸುವಿಕೆ == ಇಲ್ಲಿಯ ಕಲ್ಪದ ಹೆಸರುಗಳನ್ನು ಅದಕ್ಕೆ ಸಂಬಂಧಿಸಿದ ಕಲ್ಲಿನ ಯಾ ಶಿಲೆಯ ಆಧಾರದ ಮೇಲೆ ಹೆಸರಿಸಲಾಗಿದೆ. ಹೀಗಾಗಿ ಇಯೊನೊಥೆಮ್- ಕಲ್ಪದಲ್ಲಿ ದೊರೆಯುವ ಶಿಲಾ ಪದರ ಮತ್ತು ವಿಭಜನೆಯ ಇತರ ಹೆಸರುಗಳಿಗೂ ಇದು ಅನ್ವಯಿಸುತ್ತದೆ. ಹೀಗಾಗಿ ಎರಾಥೆಮ್-ಯುಗದಲ್ಲಿ ದೊರೆಯುವ ಶಿಲಾ ಪದರ. ಸಿಸ್ಟಮ್- ಅವಧಿಯಲ್ಲಿ ದೊರೆಯುವ ಶಿಲಾ ಪದರ. ಸೀರೀಸ್- ಶಕದಲ್ಲಿ ದೊರೆಯುವ ಶಿಲಾ ಪದರ. ಸ್ಟೇಜ್- ಕಾಲದಲ್ಲಿ ದೊರೆಯುವ ಶಿಲಾ ಪದರ. ಭೂಶಾಸ್ತ್ರಜ್ಞರು ಇಲ್ಲಿ ಕಾಲವನ್ನು ಹೇಳುವಾಗ ಬಳಸುವ "ಆರಂಭಿಕ", "ಮಧ್ಯದ" ಮತ್ತು "ನಂತರದ" ಪದಗಳು ಸಂಬಂಧಿತ ಶಿಲಾ ಪದರಗಳು "ಕೆಳ","ನಡುವಿನ" ಮತ್ತು "ಮೇಲಿನ" ಪದರಗಳು ಎಂದು ಅರ್ಥೈಸುತ್ತಾರೆ. ಭೂಗೋಳಿಕ ಕಾಲಮಾನದ ಹೆಸರುಗಳು ಕೆಲವೊಮ್ಮೆ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆಯಾಗಿ ಇರುತ್ತಿದ್ದವು. ಉದಾಹರಣೆಗೆ ಉತ್ತರ ಅಮೆರಿಕದಲ್ಲಿ ಕೆಳ ಕ್ಯಾಂಬ್ರಿಯನ್‌ ಕಾಲಮಾನವನ್ನು ವಾಕೊಬನ್ ಸೀರಿಸ್ ಎಂದು ಕರೆಯುತ್ತಿದ್ದು ಅದನ್ನು ಕಂಡುಬಂದ ಟ್ರೈಲೊಬೈಟ್‌ಗಳ ಆಧಾರದ ಮೇಲೆ ಉಪವಿಭಜನೆ ಮಾಡುತ್ತಿದ್ದರು. ಜಗತ್ತಿನಾದ್ಯಂತ ಏಕರೂಪದಲ್ಲಿ ಬಳಸುವಂತೆ ಇಂಟರ್ನಾಶನಲ್ ಕಮಿಶನ್ ಆನ್ ಸ್ಟ್ರಾಟಿಗ್ರಫಿ ಇದನ್ನು ಹೊಂದಾಣಿಕೆ ಮಾಡಿತು. == ಹೆಸರಿಸುವಿಕೆ ಇತಿಹಾಸ == === ಆರಂಭಿಕ ಇತಿಹಾಸ === ಪ್ರಾಚೀನ ಗ್ರೀಸ್‌ನ ಅರಿಸ್ಟಾಟಲ್ ಕಲ್ಲಿನಲ್ಲಿರುವ ಕಪ್ಪೆಚಿಪ್ಪುಗಳು (ಮೃದ್ವಂಗಿಗಳ ಚಿಪ್ಪು) ಸಮುದ್ರ ದಡದಲ್ಲಿ ದೊರೆಯುವ ಕಪ್ಪೆಚಿಪ್ಪುಗಳನ್ನು ಹೋಲುತ್ತಿರುವದನ್ನು ಗಮನಿಸಿ, ಪಳಿಯುಳಿಕೆಗಳು ಒಮ್ಮೆ ಬದುಕಿದ ಜೀವಿಗಳಾಗಿದ್ದವು ಎಂದು ಭಾವಿಸಿದ. ಲಿಯನಾರ್ಡೊ ಡಾ ವಿನ್ಸಿ ಈ ವಿವರಣೆ ಸರಿಯೆಂದು ಗುರುತಿಸಿದ. ಹನ್ನೊಂದನೆಯ ಶತಮಾನದ ಪರ್ಶಿಯಾದ ಭೂಗೋಳಶಾಸ್ತ್ರಜ್ಞ ಅವಿಸೆನ್ನ (ಇಬ್ನಾ ಸಿನಾ) ಮತ್ತು ಹದಿಮೂರನೆಯ ಶತಮಾನದ ಡೊಮಿನಿಕಾದ ಬಿಶಪ್ ಆಲ್ಬರ್ಟಸ್ ಮ್ಯಾಗ್ನಸ್ (ಸಕ್ಸೋನಿ ಆಲ್ಬರ್ಟ್) ಅರಿಸ್ಟಾಟಲ್‌ನ ವಿವರಣೆಯನ್ನು ಸಾವಯವ ಪದಾರ್ಥವನ್ನು ಶಿಲೆಯಾಗಿಸುವ ದ್ರವವಾಗಿ ಹಿಗ್ಗಿಸಿದರು. ಭೂಗೋಳದ ಕಾಲಮಾನ ನಿರ್ಣಯದಲ್ಲಿನ ಮೊದಲ ನಿಯಮ ಮೇಲಿನಪದರದ ನಿಯಮವನ್ನು ಅವಿಸೆನ್ನ ಮೊದಲು ತನ್ನ ೧೦೨೭ರ ಪುಸ್ತಕ ಕಿತಾಬ್ ಅಲ್ ಶಿಫಾದಲ್ಲಿ ಹೇಳಿದ. === ಪ್ರಾಥಮಿಕ ನಿಯಮಗಳ ರೂಪಗೊಳ್ಳುವಿಕೆ === ಭೌಗೋಳಿಕ ಕಾಲಮಾನದ ಬಗೆಗಿನ ಪ್ರಾಥಮಿಕ ನಿಯಮಗಳನ್ನು ಹದಿನೇಳನೆಯ ಶತಮಾನದಲ್ಲಿ ನಿಕೊಲಸ್ ಸ್ಟೆನೊ ರೂಪಿಸಿದ. ಕಲ್ಲಿನ ಪದರಗಳು ಒಂದರ ನಂತರ ಒಂದು ಅನುಕ್ರಮವಾಗಿ ರೂಪಗೊಂಡಿರುತ್ತವೆ ಮತ್ತು ಪ್ರತೀ ಪದರವೂ ಕಾಲದ ಒಂದು "ಹೋಳನ್ನು" ಪ್ರತಿನಿಧಿಸುತ್ತದೆ ಎಂದು ಸ್ಟೆನೊ ವಾದಿಸಿದ. ಅವನು ಮೇಲಿನಪದರ ನಿಯಮ ರೂಪಿಸಿದ. ಇದರ ಪ್ರಕಾರ ಯಾವುದೇ ನಿರ್ದಿಷ್ಟ ಪದರದಲ್ಲಿನ ಕೆಳಗಿನ ಪದರವು ಬಹುಶ ಮೇಲಿನ ಪದರಕ್ಕಿಂತ ಕಾಲದಲ್ಲಿ ಮುಂಚಿನದಾಗಿರುತ್ತದೆ. ಸ್ಟೆನೊನ ನಿಯಮಗಳು ಸರಳವಾಗಿದ್ಯಾಗ್ಯೂ ಅವುಗಳನ್ನು ಅನ್ವಯಿಸುವುದು ಅಷ್ಟೇನೂ ಸುಲಭವಾಗಿರಲಿಲ್ಲ ಮತ್ತು ವಾಸ್ತವದ ಕಲ್ಲಿನ ಬಗೆಗೆ ಅವನ್ನು ಅನ್ವಯಿಸುವುದು ಸಂಕೀರ್ಣವಾಗಿತ್ತು. ಕೆಲಕಾಲದ ನಂತರ ಹದಿನೆಂಟನೆಯ ಶತಮಾನದ ಭೂಗೋಳಶಾಸ್ತ್ರಜ್ಞರು ಕೆಳಗಿನ ಸಮಸ್ಯೆಗಳನ್ನು ಗುರುತಿಸಿದರು. ಕಲ್ಲಿನ ಪದರಗಳು ಸಂಚಯವಾದ ನಂತರ ಕೆಲವೊಮ್ಮೆ ಸವೆಯ ಬಹುದು, ಆಕಾರ ಕೆಡಬಹುದು, ಒರೆಯಾಗ ಬಹುದು ಮತ್ತು ತಿರುವುಮುರುವು ಆಗಬಹುದು ಸಹ. ಒಂದೇ ಕಾಲಮಾನದಲ್ಲಿ ರೂಪುಗೊಂಡ ಪದರಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿ ಕಾಣಬಹುದು ಯಾವುದೇ ಪ್ರದೇಶದ ಪದರವು ಭೂಮಿಯ ದೀರ್ಘ ಇತಿಹಾಸದ ಒಂದು ಸಣ್ಣ ಭಾಗ ಮಾತ್ರ. ಚಿಂತನೆಯ ಪ್ರಮುಖ ಬದಲಾವಣೆಯು ಜೇಮ್ಸ್ ಹಟ್ಟನ್ ಚಿಂತನೆಯಿಂದ ಬಂದಿತು. ಅವನು ತನ್ನ ಪ್ರಬಂಧ ಥಿಯರಿ ಆಫ್ ಅರ್ಥನ್ನು ೧೭೮೫ರ ಮಾರ್ಚ್ ಮತ್ತು ಏಪ್ರಿಲ್‌ಗಳಲ್ಲಿ ಎಡಿನ್‌ಬರ್ಗ್‌ನ ರಾಯಲ್ ಸೊಸೈಟಿ ಮುಂದೆ ಪ್ರಸ್ತುತಪಡಿಸಿದ. “೨೦ನೆಯ ಶತಮಾನದ ದೃಷ್ಟಿಕೋನದಿಂದ ನೋಡಿದಲ್ಲಿ ಜೇಮ್ಸ್ ಹಟ್ಟನ್‌ನ ಪ್ರಸ್ತುತ ಪಡಿಸಿದ ಚಿಂತನೆಯು ಆಧುನಿಕ ಭೂಗೋಳಶಾಸ್ತ್ರದ ಬುನಾದಿಗಳಾದವು”. ಭೂಮಿಯ ಒಳ ಆವಾರಣವು ಬಿಸಿಯಾಗಿದೆ ಮತ್ತು ಈ ಬಿಸುಪೇ ಹೊಸ ಕಲ್ಲುಗಳಾಗಿಸುವ ಇಂಜಿನ್. ಭೂಮಿಯನ್ನು ಗಾಳಿ ಮತ್ತು ನೀರು ಸವೆಯಿಸುತ್ತವೆ ಮತ್ತು ಇದು ಸಾಗರಗಳಲ್ಲಿ ಪದರಗಳಾಗಿ ಸಂಚಿತವಾಗುತ್ತದೆ. ಈ ಗಸಿಯನ್ನು ಭೂಮಿಯ ಒಳಗಿನ ಬಿಸುಪು ಕಲ್ಲಾಗಿಸುತ್ತದೆ ಮತ್ತು ಇದು ಮೇಲೆದ್ದು ಭೂಮಿಯಾಗುತ್ತದೆ ಎಂಬುಂದು ಅವನ ಚಿಂತನಾ ಸರಣಿಯಾಗಿತ್ತು. ಪ್ರವಾಹ ಆಧಾರಿತ ಚಿಂತನೆಯಾದ “ನೆಪ್ಚೂನಿಸ್ಟ್”ನಿಂದ ಭಿನ್ನವಾಗಿ ಇದನ್ನು “ಪ್ಲುಟೋನಿಸ್ಟ್” ಎಂದು ಕರೆಯಲಾಯಿತು. === ಭೂಗೋಳದ ಕಾಲಮಾನಗಳು ಮೊದಲ ಪ್ರಯತ್ನಗಳು === ಮೊದಲನೆಯ ಭೂಗೋಳದ ಕಾಲಮಾನಗಳನ್ನು ನಿರ್ಣಯಿಸುವ ಗಂಭೀರ ಪ್ರಯತ್ನ ಹದಿನೆಂಟನೆಯ ಶತಮಾನದಲ್ಲಿ ನಡೆಯಿತು. ಇಂತಹ ಬಹಳ ಪ್ರಭಾವಿ ಪ್ರಯತ್ನವು ಭೂಮಿಯ ಗಡಸು ಹೊರಮೈ ಕಲ್ಲುಗಳನ್ನು ಪ್ರೈಮರಿ, ಸೆಂಕಡರಿ, ಟರ್ಶಿಯರಿ ಮತ್ತು ಕ್ವಾರ್ಟೆನರಿ ಎಂದು ನಾಲ್ಕು ವಿಭಜನೆಯನ್ನು ಮಾಡಿತು (ಇದರ ಪ್ರವರ್ತಕರಲ್ಲಿ ಮುಖ್ಯವಾದವರು ಅಬ್ರಾಹಾಂ ವೆರ್ನರ್). ಈ ಸಿದ್ಧಾಂತದ ಪ್ರಕಾರ ಪ್ರತೀ ನಮೂನೆಯ ಕಲ್ಲೂ ಭೂಮಿಯ ಇತಿಹಾಸದಲ್ಲಿ ನಿರ್ದಿಷ್ಟ ಕಾಲದಲ್ಲಿ ರೂಪಗೊಂಡಿದ್ದು. ಹೀಗಾಗಿ “ಟರ್ಶಿಯರಿ ಅವಧಿ” ಮತ್ತು ಹಾಗೆಯೇ “ಟರ್ಶಿಯರಿ ಕಲ್ಲು” ಎಂದು ಹೇಳಬಹುದಾಗಿತ್ತು. ಭೂಗೋಳಿಕ ಕಾಲಮಾನದ ಹೆಸರಾಗಿ “ಟರ್ಶಿಯರಿ” (ಈಗ ಪಾಲಿಯೊಜೀನ್ ಮತ್ತು ನಿಯೊಜೀನ್) ಇಪ್ಪತನೆಯ ಶತಮಾನದಲ್ಲಿಯೂ ಉಳಿದುಕೊಂಡಿತ್ತು. ಇಂದೂ ಸದ್ಯದ ಅವಧಿಗೆ ಕ್ವಾರ್ಟೆನರಿ ಎಂದು ಬಳಸುತ್ತಿದ್ದೇವೆ. ಪದರವನ್ನು ಅದರಲ್ಲಿ ದೊರೆಯುವ ಪಳಿಯುಳಿಕೆಗಳ ಆಧಾರದ ಮೇಲೆ ಗುರುತಿಸುವಲ್ಲಿ ಆರಂಭಿಕ ಹತ್ತೊಂಬತ್ತನೆಯ ಶತಮಾನದ ವಿಲಿಯಂ ಸ್ಮಿಥ್, ಜಾರ್ಜಸ್ ಕುವಿಯರ್, ಜೀನ್ ಡಿಒಮಲಿಯಸ್ ಡಿಹಲಾಯ್ ಮತ್ತು ಆಲೆಕ್ಸಾಂಡ್ರೆ ಬ್ರೊಗ್ನಿಯಾರ್ಟ್ ಮುಂಚೂಣಿಯಲ್ಲಿದ್ದರು. ಇದು ಭೂಗೋಳಶಾಸ್ತ್ರಜ್ಞರಿಗೆ ಹೆಚ್ಚು ಖಚಿತವಾಗಿ ಭೂಮಿಯ ಇತಿಹಾಸವನ್ನು ವಿಭಜಿಸಲು ಸಹಾಯ ಮಾಡಿತು. ಇದು ಪದರಗಳನ್ನು ದೇಶಗಳ ಗಡಿಯಾಚೆ (ಖಂಡಗಳಾಚೆಯೂ ಸಹ) ಅವುಗಳಲ್ಲಿರುವ ಒಂದೇ ರೀತಿಯ ಪಳಿಯುಳಿಕೆಗಳ ಮೂಲಕ ಸಂಬಂಧ ಕಲ್ಪಿಸಲು ಸಾಧ್ಯವಾಯಿತು. ಇವು ಒಂದೇ ಕಾಲಮಾನದಲ್ಲಿ ಸಂಚಿತವಾಗುವ ಸಾಧ್ಯತೆಯೇ ಹೆಚ್ಚು. ೧೮೨೦ ಮತ್ತು ೧೮೫೦ರ ನಡುವಿನ ಯುರೋಪಿನ ಪದರ ಮತ್ತು ಪಳಿಯುಳಿಕೆಗಳ ವಿವರವಾದ ಅಧ್ಯಯನವು ಇಂದು ಬಳಸುವ ಭೂಗೋಳಿಕ ಕಾಲಮಾನಗಳ ಅನುಕ್ರಮವನ್ನು ಸ್ಥಾಪಿಸಲು ನೆರವಾಯಿತು. === ಕಾಲಮಾನ ನಿಗಧಿ === ವಿಲಿಯಂ ಸ್ಮಿತ್ ಮತ್ತು ಸರ್ ಚಾರ್ಲ್ಸ್ ಲೆಲೆ ಕಲ್ಲಿನ ಪದರಗಳು ಅನುಕ್ರಮ ಘಟನೆಗಳೆಂತಲೂ ಮತ್ತು ಅವುಗಳ ಕಾಲಮಾನವನ್ನು ನಿರ್ದಿಸುವುದು ಕೇವಲ ಊಹೆಯಾಗ ಬಲ್ಲದು ಎಂದು ಗುರುತಿಸಿದರು. ಆದಾಗ್ಯೂ ಹಲವು ಭೂಗೋಳಶಾಸ್ತ್ರಜ್ಞರು ಮತ್ತು ಪ್ರಗ್ಜೀವಿಶಾಸ್ತ್ರಜ್ಞರು ಭಿನ್ನ ಪದರಗಳು ಮತ್ತು ಪಳಿಯುಳಿಕೆಗಳ ಸಾಕ್ಷೇಪಿಕ ಸ್ಥಾನದ ಮೇಲೆ ಮತ್ತು ಅಂದಾಜಿಸಿದ ಹಲವು ರೀತಿಯ ಹವೆಗೆ ಒಡ್ಡುವಿಕೆ, ಸವಕಳಿ, ಮೆಕ್ಕಲು ಪೇರುವಿಕೆ ಮತ್ತು ಕಲ್ಲಾಗುವಿಕೆಯಿಂದ ಉಂಟಾದ ಪರಿಣಾಮಗಳ ಆಧಾರದ ಮೇಲೆ ಭೂಗೋಳದ ಕಾಲಮಾನದ ಕೋಷ್ಟಕವನ್ನು ತಯಾರಿಸಿದರು. ಸೃಷ್ಟಿವಾದಿಗಳ ಬೈಬಲ್ ಆಧಾರಿತ ಭೂಮಿಯ ಆಯುಶ್ಯದ ಅಂದಾಜು ೬ ರಿಂದ ೭ ಸಾವಿರಗಳ ವರೆಗೆ ಇದ್ದರೆ ಈ ಶಾಸ್ತ್ರಜ್ಞರು ಅಂದಾಜು ಕೆಲವು ದಶಲಕ್ಷ ವರುಷಗಳ ಮೇರೆಗೆ ಇತ್ತು. ಆದರೆ ೧೮೯೬ರಲ್ಲಿ ವಿಕಿರಣಪಟುತ್ವ (ರೇಡಿಯೊಆಕ್ಟಿವಿಟಿ) ಕಂಡುಹಿಡಿಯುವ ವರೆಗೆ ಮತ್ತು ಇದರ ಆಧಾರದ ಮೇಲೆ ಇಪ್ಪನೆಯ ಶತಮಾನದ ಮೊದಲನೆಯ ಅರ್ಧದಲ್ಲಿ ವಿಕಿರಣಪಟುತ್ವ ಕಾಲಗಣನಾ ಪದ್ಧತಿಯು ಚಾಲ್ತಿ ಬರುವವರೆಗೆ (ಇದನ್ನು ಬಳಸುವಲ್ಲಿ ಆರ್ಥರ್ ಹೋಮ್ಸ್‌ನಂತಹ ಭೂಶಾಸ್ತ್ರಜ್ಞರು ಮುಂಚೂಣಿಯಲ್ಲಿದ್ದರು) ಇವು ಅಷ್ಟೇನೂ ನಿಖರವಾಗಿರಲಿಲ್ಲ. ಮೊದಲ ಖಚಿತ ಕಾಲಮಾನದ ಭೂಗೋಳಿಕ ಕಾಲಮಾನವನ್ನು ಬ್ರಿಟಿಶ್ ಭೂಶಾಸ್ತ್ರಜ್ಞ ಆರ್ಥರ್ ಹೋಮ್ಸ್ ೧೯೧೩ರಲ್ಲಿ ಪ್ರಕಟಿಸಿದರು. ಅವರ ಏಜೆ ಆಫ್ ಅರ್ಥ್ನಲ್ಲಿ ಭೂಮಿಯ ವಯಸ್ಸನ್ನು ಕನಿಷ್ಟ ೧.೬ ಶತಕೋಟಿ ವರುಷ ಎಂದು ಅಂದಾಜಿಸಿದರು. ೧೯೭೭ರಲ್ಲಿ ಗ್ಲೋಬಲ್ ಕಮಿಶನ್ ಆನ್ ಸ್ಟ್ರಾಟಿಗ್ರಫಿ (ಈಗ ಇಂಟರ್ನಾಶನಲ್ ಕಮಿಶನ್ ಆನ್ ಸ್ಟ್ರಾಟಿಗ್ರಫಿ ಅಥವಾ ಐಸಿಎಸ್) ಭೂಗೋಳಿಕ ಅವಧಿ ಮತ್ತು ಜೀವಿಗಳ ಹಂತದ ಬಗೆಗಿನ ಜಾಗತಿಕ ಉಲ್ಲೇಖಗಳನ್ನು ವ್ಯಾಖ್ಯಾನಿಸುವುದರಲ್ಲಿ ನಿರತವಾಯಿತು. ಇದು ಜಿಎಸ್ಎಸ್‌ಪಿ (ಗ್ಲೋಬಲ್ ಬೌಂಡರಿ ಸ್ಟ್ರಾಟೊಟೈಪ್ ಸೆಕ್ಶನ್ ಅಂಡ್ ಪಾಯಿಂಟ್) ಯಾವುದೇ ಹಂತದ ಭೂಗೋಳಿಕ ಕಾಲಮಾನದ ಗಡಿಯನ್ನು ಸಾರ್ವತ್ರಿಕವಾಗಿ ಒಪ್ಪುವಂತೆ ಗುರುತಿಸುವ ಕೆಲಸ ಮಾಡುತ್ತದೆ. ಇಂತಹ ಇತ್ತೀಚಿನ ಮಾಹಿತಿಯು ಆ ಸಂಸ್ಥೆಯ ಅಂತರ್ಜಾಲದಲ್ಲಿ ಲಭ್ಯವಿದೆ. == ಯುಗಗಳು == == ಭೂಗೋಳಿಕ ಕಾಲಮಾನದ ಕೋಷ್ಟಕ == ಈ ಕೋಷ್ಟಕದಲ್ಲಿ ಭೂಗೋಳಿಕ ಕಾಲಮಾನದ ಆಯಾ ಕಾಲಗಳಲ್ಲಿ ನಡೆದ ಪ್ರಮುಖ ಘಟನೆಗಳ ಸಾರಸಂಗ್ರಹವಾಗಿ ಕೊಡಲಾಗಿದೆ. ಇಲ್ಲಿಯ ಕಾಲಮಾನಕ್ಕೆ ಐಸಿಎಸ್ ನಿರ್ದರಿತ ಕಾಲಮಾನ ಆಧಾರವಾಗಿದೆ. ಕೋಷ್ಟಕದ ಮೇಲೆ ತೀರ ಇತ್ತೀಚಿನ ಮತ್ತು ಕೆಳಗೆ ಹೋದಂತೆ ನಂತರದ ಕಾಲಮಾನಗಳನ್ನು ಕೊಡಲಾಗಿದೆ. === ಪ್ರಿಕ್ಯಾಂಬಿಯನ್ ಕಾಲಮಾನದ ಪ್ರಸ್ತಾವನೆ === ಐಸಿಎಸ್‌ನ ಜಿಯೋಲಾಜಿಕಲ್ ಟೈಮ್‌ಸ್ಕೇಲ್ 2012 ಪುಸ್ತಕವು ಪ್ರಿಕ್ಯಾಂಬ್ರಿಯನ್ ಕಾಲಮಾನಗಳನ್ನು ಗಣನೀಯವಾಗಿ ಬದಲಾಯಿಸಿ ಭೂಮಿಯ ರೂಪಗೊಳ್ಳುವಿಕೆ ಅಥವಾ ಬೃಹತ್ ಆಮ್ಲಜನಕ ಘಟನೆಗಳಂತಹವನ್ನು ಸೇರಿಸುವಂತೆ ಜೊತೆಗೆ ಸಂಬಂಧಿತ ಕಾಲಮಾನಕ್ಕೆ ಬಹಳಷ್ಟು ಹಿಂದಿನ ಹೆಸರುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಹಡಿಯೇನ್ ಕಲ್ಪ- ೪೬೦೦ ರಿಂದ ೪೦೩೦ ದವಹಿಂ ಕೆವೊಟಿಯನ್ ಯುಗ- ೪೬೦೦ ರಿಂದ ೩೦೦೩ ದವಹಿಂ- ಗ್ರೀಕ್ ಪುರಾಣದ ಕೆವೋಸ್ ಮತ್ತು ಈ ಹಂತದ ಅವ್ಯವಸ್ಥೆ ಎರಡನ್ನೂ ಪ್ರತಿನಿಧಿಸುವ ಹೆಸರು. ಜಾಕ್ ಹಿಲಿಸಿಯನ್ ಅಥವಾ ಜಿರ್‌ಕೋನಿಯನ್ ಯುಗ- ೪೦೦೪ ರಿಂದ ೪೦೩೦ ದವಹಿಂ- ಎರಡೂ ಹೆಸರುಗಳೂ ಪಶ್ಚಿಮ ಆಸ್ಟ್ರೇಲಿಯಾದ ಅತಿ ಪುರಾತನ ಕನಿಜ ಜಿರ್ಕಾನ್ ದೊರೆತ ಜಾಕ್‌ ಹಿಲ್ಸ್‌ಗಳ ಬಗೆಗೆ ಇದೆ. ಆರ್ಕಿಯನ್ ಕಲ್ಪ- ೪೦೩೦ ರಿಂದ ೨೪೨೦ ದವಹಿಂ ಪಾಲಿಯೊಆರ್ಕಿಯನ್ ಯುಗ- ೪೦೩೦ ರಿಂದ ೩೪೯೦ ದವಹಿಂ ಅಕಸ್ಟಾನ್ ಅವಧಿ- ೪೦೩೦ ರಿಂದ ೩೮೧೦ ದವಹಿಂ- ಕೆನಡದಲ್ಲಿರು ಅಕಸ್ಟಾನ್ ಗ್ನೆಯಿಸ್ ಶಿಲೆಯ ಹೆಸರು ಕೊಡಲಾಗಿದೆ. ಇಸುವನ್ ಅವಧಿ- ೩೮೧೦ ರಿಂದ ೩೪೯೦ ದವಹಿಂ- ಗ್ರೀನ್‌ಲ್ಯಾಂಡಿನ ಇಸುವ ಹಸಿರುಕಲ್ಲಿನ ಪಟ್ಟಿಯ ಹೆಸರು ಕೊಡಲಾಗಿದೆ. ಮೀಸೊಆರ್ಕಿಯನ್ ಯುಗ- ೩೪೯೦ ರಿಂದ ೨೭೮೦ ದವಹಿಂ ವಾಲಬರನ್ ಅವಧಿ- ೩೪೯೦ ರಿಂದ 3020 ದವಹಿಂ- ದಕ್ಷಿಣ ಆಫ್ರಿಕಾದ ಕಾಪ್‌ವಾಲ್ ಮತ್ತು ಪಶ್ಚಿಮ ಆಸ್ಟ್ರೇಲಿಯಾದ ಪಿಲ್‌ಬರ ಕ್ರೇಟಾನ್ (ಪ್ರಾಚೀನ ಕಲ್ಲು) ಹೆಸರುಗಳ ಮಿಶ್ರಣ. ಪೊಂಗೊಲನ್ ಅವಧಿ- ೩೦೨೦ ರಿಂದ ೨೭೮೦ ದವಹಿಂ- ದಕ್ಷಿಣ ಆಫ್ರಿಕಾ ಮತ್ತು ಸ್ವಾಜಿಲ್ಯಾಂಡ್‌ನಲ್ಲಿರುವ ಒಂದು ಪ್ರದೇಶದಿಂದ (ಅಗ್ನಿಪರ್ವತದ ಮತ್ತು ಗಷ್ಟಿನ ಕಲ್ಲುಗಳಿರುವ) ಈ ಹೆಸರು ಪಡೆದಿದೆ. ನಿಯೊಆರ್ಕಿಯನ್ ಯುಗ- ೨೭೮೦ ರಿಂದ ೨೪೨೦ ದವಹಿಂ ಮಿಥೊನಿಯನ್ ಅವಧಿ- ೨೭೮೦ ರಿಂದ ೨೬೩೦ ದವಹಿಂ- ಮಿಥೇನನ್ನು ಶಕ್ತಿಗೆ ಮತ್ತು ಇಂಗಾಲದ ಆಕಾರವಾಗಿ ಬಳಸುವ ಪ್ರೋಕ್ಯಾರಿಯಟ್‌ಗಳು ಈ ಅವಧಿಯಲ್ಲಿ ಹೆಚ್ಚಾಗಿರುವ ಕಾರಣಕ್ಕೆ ಈ ಹೆಸರು ಪಡೆದಿದೆ. ಸೈಡೆರಿಯನ್ ಅವಧಿ- ೨೬೩೦ ರಿಂದ ೨೪೨೦ ದವಹಿಂ- ಈ ಅವಧಿಯ ದೊಡ್ಡ ಮಟ್ಟದ ಕಬ್ಬಿಣದ ರೂಪಗಳ ಕಾರಣಕ್ಕೆ ಈ ಹೆಸರು ಪಡೆದಿದೆ. ಪ್ರೊಟೆರೊಜೋಯಿಕ್ ಕಲ್ಪ- ೨೪೨೦ ರಿಂದ ೫೪೧ ದವಹಿಂ ಪಾಲಿಯೊಪ್ರೊಟೆರೊಜೋಯಿಕ್ ಯುಗ- ೨೪೨೦ ರಿಂದ ೧೭೮೦ ದವಹಿಂ ಆಕ್ಸಿಜೀನಿಯನ್ ಅವಧಿ- ೨೪೨೦ ರಿಂದ ೨೨೫೦ ದವಹಿಂ- ಈ ಅವಧಿಯಲ್ಲಿನ ಜಾಗತಿಕ ಆಮ್ಲಜನೀಕರಣ ವಾತಾವರಣದ ಕಾರಣಕ್ಕೆ ಈ ಹೆಸರು ಪಡೆದಿದೆ. ಜಟುಲಿಯನ್ ಅಥವಾ ಯುಕ್ಯಾರಿಯನ್ ಅವಧಿ- ೨೨೫೦ ರಿಂದ ೨೦೬೦ ದವಹಿಂ- ಕಾರ್ಬನ್ ಸೈಕಲ್ ಏರುಪೇರಾಗುವದನ್ನು ಸೂಚಿಸುವ ಲೊಮಗುಂಡಿ-ಜಟುಲಿ ಐಸೊಟೋಪ್ ಘಟನೆಯನ್ನು ಮತ್ತು ಯುಕ್ಯಾರಿಯೋಟ್ ಜೀವಿಗಳ ಮೊದಲ ಪಳಿಯುಳಿಕೆ ಗುರುತಿಸುದುದನ್ನು ಈ ಹೆಸರುಗಳು ಸೂಚಿಸುತ್ತವೆ. ಕೊಲಂಬಿಯನ್ ಅವಧಿ- ೨೦೬೦ ರಿಂದ ೧೭೮೦ ದವಹಿಂ – ಕೊಲಬಿಯನ್ ಸೂಪರ್ ಖಂಡದಿಂದ ಈ ಹೆಸರು ಪಡೆದಿದೆ. ಮೀಸೊಪ್ರೊಟೆರೊಜೋಯಿಕ್ ಯುಗ- ೧೭೬೦ ರಿಂದ ೮೫೦ ದವಹಿಂ ರೊಡಿನಿಯನ್ ಅವಧಿ- ೧೭೬೦ ರಿಂದ ೮೫೦ ದವಹಿಂ – ರೊಡಿನಿಯ ಸೂಪರ್ ಖಂಡ ಮತ್ತು ಸ್ಥಿರ ವಾತಾವರಣದ ಮೇಲೆ ಈ ಹೆಸರು ಬಂದಿದೆ. ನಿಯೊಪ್ರೊಟೆರೊಜೋಯಿಕ್ ಯುಗ- ೮೫೦ ರಿಂದ ೫೪೧ ದವಹಿಂ ಕ್ರಯೋಜಿನಿಯನ್ ಅವಧಿ- ೮೫೦ ರಿಂದ ೬೩೫ ದವಹಿಂ- ಹಲವು ಹಿಮಯುಗಗಳ ಕಾರಣಕ್ಕೆ ಈ ಹೆಸರು. ಇಡಿಯಕರನ್ ಅವಧಿ- ೬೩೫ ರಿಂದ ೫೪೧ ದವಹಿಂ. == ಟಿಪ್ಪಣಿಗಳು == == ಉಲ್ಲೇಖಗಳು ==